iPhone Overheating: ನಿಮ್ಮ ಐಫೋನ್ ಹೆಚ್ಚು ಬಿಸಿಯಾಗುತ್ತಿದೆಯೇ? ಕಾರಣಗಳು ಮತ್ತು ಪರಿಹಾರಗಳು ಇಲ್ಲಿವೆ...

ಐಫೋನ್‌ಗಳು ಅದ್ಭುತ ಫೀಚರ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಗುರುತನ್ನು ಪಡೆದಿವೆ. ಆದರೆ ಕೆಲವೊಮ್ಮೆ ಕೆಲ ಬಳಕೆದಾರರಿಗೆ ಐಫೋನ್ ಹೆಚ್ಚು ಬಿಸಿಯಾಗುವ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಸ್ಮಾರ್ಟ್ ಟಿಪ್ಸ್ ಪಾಲಿಸುವುದು ಬಹಳ ಮುಖ್ಯ. ಆ ಟಿಪ್ಸ್ ಏನೆಂದು ಇಲ್ಲಿ ನೋಡೋಣ.

ಆಪಲ್ ಐಫೋನ್‌ಗಳು ತಮ್ಮ ಶಕ್ತಿಶಾಲಿ ಪ್ರೊಸೆಸರ್‌, ಆಕರ್ಷಕ ಡಿಸ್ಪ್ಲೇ, ಸ್ಟೈಲಿಷ್ ಡಿಸೈನ್ ಮತ್ತು 5ಜಿ ಸಾಮರ್ಥ್ಯದ ಮೂಲಕ ಟೆಕ್ ಜಗತ್ತಿನಲ್ಲಿ ವಿಶೇಷ ಸ್ಥಾನ ಪಡೆದಿವೆ. ಆದರೆ ಕೆಲ ಸಂದರ್ಭಗಳಲ್ಲಿ ಐಫೋನ್ ಹೆಚ್ಚು ಬಿಸಿಯಾಗುವ (iPhone Overheating) ಸಮಸ್ಯೆ ಕಂಡುಬರುತ್ತಿದೆ. ಸಾಮಾನ್ಯವಾಗಿ ಫೋನ್‌ನಿಂದ ಸ್ವಲ್ಪ ಬಿಸಿಯಾಗುವುದು ಸಹಜ. ಆದರೆ ನಿರಂತರವಾಗಿ ಹೆಚ್ಚು ಬಿಸಿಯಾಗುವುದರಿಂದ ಫೋನ್ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಆಯುಷ್ಯಕ್ಕೆ ಹಾನಿಯಾಗಬಹುದು. ಇಂತಹ ಸಮಸ್ಯೆ ಎದುರಿಸುತ್ತಿರುವವರು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

1. ಹೆಚ್ಚು ಬ್ಯಾಕ್‌ಗ್ರೌಂಡ್ ಆ್ಯಪ್‌ಗಳು

ಐಫೋನ್ ಹೆಚ್ಚು ಬಿಸಿಯಾಗಲು ಪ್ರಮುಖ ಕಾರಣಗಳಲ್ಲಿ ಒಂದು ಬ್ಯಾಕ್‌ಗ್ರೌಂಡ್‌ನಲ್ಲಿ ಅನೇಕ ಆ್ಯಪ್‌ಗಳು ಚಾಲನೆಯಲ್ಲಿರುವುದು. ಈ ಆ್ಯಪ್‌ಗಳು CPU, ಬ್ಯಾಟರಿ ಮತ್ತು ನೆಟ್‌ವರ್ಕ್ ಸಂಪನ್ಮೂಲಗಳನ್ನು ಬಳಸುವುದರಿಂದ ಹೆಚ್ಚುವರಿ ಬಿಸಿಯಾಗುತ್ತದೆ. ಅನಗತ್ಯ ಆ್ಯಪ್‌ಗಳನ್ನು ಕ್ಲೋಸ್ ಅಥವಾ ಡಿಲೀಟ್ ಮಾಡಿ. ಮಧ್ಯಮಧ್ಯೆ ಐಫೋನ್‌ನ್ನು ರೀಸ್ಟಾರ್ಟ್ ಮಾಡುವುದರಿಂದಲೂ ಬಿಸಿಯ ಪ್ರಮಾಣ ಕಡಿಮೆಯಾಗುತ್ತದೆ.

2. ಗೇಮಿಂಗ್ ಅಥವಾ ಸ್ಟ್ರೀಮಿಂಗ್

ಹೈ-ಎಂಡ್ ಗ್ರಾಫಿಕ್ಸ್ ಗೇಮ್‌ಗಳು, AR ಆ್ಯಪ್‌ಗಳು ಅಥವಾ ಹೆಚ್ಚು ಸಮಯ ವೀಡಿಯೊ ಸ್ಟ್ರೀಮಿಂಗ್ ಮಾಡುವುದರಿಂದ GPU ಮತ್ತು ಪ್ರೊಸೆಸರ್ ಮೇಲೆ ಒತ್ತಡ ಹೆಚ್ಚಾಗಿ ಬಿಸಿಯಾಗುತ್ತದೆ. ಹೆಚ್ಚು ಸಮಯ ಗೇಮಿಂಗ್ ಅಥವಾ ಸ್ಟ್ರೀಮಿಂಗ್ ಮಾಡುವಾಗ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳಿ. ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ. ಲೋ ಪವರ್ ಮೋಡ್ ಆನ್ ಮಾಡಿದರೆ ಬ್ಯಾಕ್‌ಗ್ರೌಂಡ್ ಚಟುವಟಿಕೆ ಕಡಿಮೆಯಾಗುತ್ತದೆ.

3. ಚಾರ್ಜಿಂಗ್ ಸಮಯದಲ್ಲಿ ಫೋನ್ ಬಳಸುವುದು

ಚಾರ್ಜಿಂಗ್ ಮಾಡುವಾಗ ಗೇಮಿಂಗ್, ಕಾಲ್‌ಗಳು ಅಥವಾ ವೀಡಿಯೊ ಸ್ಟ್ರೀಮಿಂಗ್ ಹೀಗೆ ಭಾರೀ ಟಾಸ್ಕ್‌ಗಳನ್ನು ಮಾಡಿದರೆ ಹೆಚ್ಚುವರಿ ಬಿಸಿಯಾಗುತ್ತದೆ. ಚಾರ್ಜಿಂಗ್ ಸಮಯದಲ್ಲಿ ಐಫೋನ್ ಅನ್ನು ಭಾರೀ ಕೆಲಸಗಳಿಗೆ ಬಳಸಬೇಡಿ. ಆಪಲ್ ಸೆರ್ಟಿಫೈಡ್ ಚಾರ್ಜರ್ ಮತ್ತು ಕೇಬಲ್‌ಗಳನ್ನು ಮಾತ್ರ ಬಳಸಿ. ಇವು ಬಿಸಿಯಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ.

4. ನೆಟ್‌ವರ್ಕ್ ಸಿಗ್ನಲ್ ಮತ್ತು 5ಜಿ ಬಳಕೆ

ನೆಟ್‌ವರ್ಕ್ ಸಿಗ್ನಲ್ ದುರ್ಬಲವಾಗಿರುವಾಗ ಐಫೋನ್ ಹೆಚ್ಚು ಶಕ್ತಿ ಬಳಸುವುದರಿಂದ ಬಿಸಿಯಾಗುತ್ತದೆ. ನಿರಂತರ 5ಜಿ ಬಳಕೆಯೂ ಬ್ಯಾಟರಿ ಬೇಗ ಖಾಲಿಯಾಗಲು ಕಾರಣವಾಗುತ್ತದೆ. ಸಾಧ್ಯವಾದರೆ Wi-Fi ಬಳಸಿರಿ ಅಥವಾ 5ಜಿ ಅಗತ್ಯವಿಲ್ಲದಾಗ ಅದನ್ನು ಆಫ್ ಮಾಡಿ.

5. ಸಾಫ್ಟ್‌ವೇರ್ ದೋಷಗಳು (ಬಗ್‌ಗಳು)

ಕೆಲವೊಮ್ಮೆ ಸಾಫ್ಟ್‌ವೇರ್ ಬಗ್‌ಗಳು ಅಥವಾ ಹಳೆಯ iOS ಆವೃತ್ತಿಗಳಿಂದ ಐಫೋನ್ ಹೆಚ್ಚು ಬಿಸಿಯಾಗಬಹುದು. ದೊಡ್ಡ ಅಪ್‌ಡೇಟ್ ನಂತರ ನಡೆಯುವ ಬ್ಯಾಕ್‌ಗ್ರೌಂಡ್ ಇಂಡೆಕ್ಸಿಂಗ್ ಕೂಡ ಬಿಸಿಯನ್ನು ಹೆಚ್ಚಿಸುತ್ತದೆ. ಐಫೋನ್ ಅನ್ನು ಯಾವಾಗಲೂ ಹೊಸ iOS ಆವೃತ್ತಿಗೆ ಅಪ್‌ಡೇಟ್ ಮಾಡಿ. ಅಗತ್ಯವಿದ್ದರೆ ಸೆಟ್ಟಿಂಗ್‌ಗಳನ್ನು ರೀಸೆಟ್ ಮಾಡಿ ಅಥವಾ iTunes/Finder ಮೂಲಕ ಕ್ಲೀನ್ ರೀಇನ್‌ಸ್ಟಾಲ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು